ಒಗ್ಗದಿಕೆ, ಮರೆಹಾರಿಕೆ: ಒಂದು ಪ್ರಬೇಧದ ವ್ಯಕ್ತಿಗಳ ಮೇಲೆ ಪರಕೀಯ ವಸ್ತುವಿನ ಪ್ರಭಾವ ಸಾಮಾನ್ಯವಾಗಿ ನಿರೀಕ್ಷಿಸಿದಂತೆ ಒಂದೇ ಬಗೆಯದಾಗಿರಬೇಕು. ಹಾಗಲ್ಲದೇ ಆ ಪ್ರಬೇಧದ ಕೆಲವರ ದೇಹಗಳ ಊತಕಗಳು ಅಥವಾ ಅಂಗಾಂಶಗಳು ತೀರ ಭಿನ್ನವಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರೆ ಅವರು ಆ ಪರಕೀಯ ವಸ್ತುವನ್ನು ಕುರಿತು ಒಗ್ಗದಿಕೆ (ಅಲರ್ಜಿ) ಹೊಂದಿರುವರು ಎನ್ನುತ್ತಾರೆ. ಆದ್ದರಿಂದ ಒಗ್ಗದಿಕೆ ಎನ್ನುವುದು ವ್ಯಕ್ತಿವಿಶಿಷ್ಟವಾದ ಒಂದು ಲಕ್ಷಣ. ಊತಕಗಳ ಒಗ್ಗದಿಕೆಗೆ ಉದಾಹರಣೆಯಾಗಿ ಪರಾಗಜನಿತಜ್ವರ (ಹೇ ಫೀವರ್), ಆಸ್ತಮಾ, ಪಿತ್ತೀ (ಅರ್ಟಿಕೇರಿಯ), ಇಸಬು (ಎಕ್ಸೀಮ), ಸಂಪರ್ಕದಿಂದ ಒದಗುವ ಚರ್ಮಪ್ರತಿಕ್ರಿಯೆ (ಕಾಂಟ್ಯಾಕ್ಟ್‌ ಡರ್ಮಟೈಟಿಸ್), ಔಷಧಿಗಳಿಗೆ ಪ್ರತಿಕ್ರಿಯೆಗಳು-ಮುಂತಾದುವುನ್ನು  ಹೆಸರಿಸಬಹುದು. ವಿಶೇಷ ಪ್ರಭಾವಗಳಿಂದ ಆಗುವ ಪ್ರತಿಕ್ರಿಯೆಗಳಿಗೆ ಅಲರ್ಜಿ ಎಂಬ ಪದವನ್ನು ಉಪಯೋಗಿಸಲು ಕ್ಲೆಮೆನ್ಸ್‌ ಫಾನ್ ಪಿರ್ಕ್‌ ಸೂಚಿಸಿದ (1906) ವಂಶಪಾರಂಪರ್ಯವಾಗಿ ಬಂದ ಅಥವಾ ವ್ಯಕ್ತಿಯ ಜೀವನದಲ್ಲೆ ಗಳಿಸಿದ, ಪರಕೀಯ ವಸ್ತುಗಳಿಗೆ ತೋರುವ ಮಿತಿ ಮೀರಿದ ಪ್ರತಿಕ್ರಿಯೆ ಎಂಬುದು ಅಲರ್ಜಿ ಎಂಬುದರ ಈಗಿನ ಅರ್ಥ. ಈಗ 
ವೈದ್ಯರಲ್ಲದವರಲ್ಲಿ ಕೆಲವರು ಗೂರಲು ಮುಂತಾದ ಬೇನೆಗಳಿಗೆ ಅಲರ್ಜಿ ಎಂದು ಹೇಳುವುದುಂಟು.

ಹಾವುಮೀನಿನ ಲಸಿಕೆಯನ್ನು ಎರಡನೆಯ ಬಾರಿ ಚುಚ್ಚಿದಾಗ ಕೆಲವು ವೇಳೆ ಪ್ರಾಣಿಯಲ್ಲಿ ಆಗುವ ಮರಣ ಪ್ರತಿಕ್ರಿಯೆಗೆ ಅನಾಫಿಲಾಕ್ಸಿಸ್ (ಮರೆಹಾರಿಕೆ) ಎಂಬ ಪದವನ್ನು ಚಾರ್ಲ್‌್ಸ ರಿಜೆಟ್ ಬಳಕೆಗೆ ತಂದ (1898). ಲಸಿಕೆಯನ್ನು ಮೊದಲ ಸಲ ಚುಚ್ಚಿದಾಗ ಏನೂ ಕೆಟ್ಟದ್ದಾಗದುದರಿಂದ ಪ್ರೊಫೈಲಾಕ್ಸಿನ್ (ಮರೆನೀಡುವೆ) ಎಂಬುದಕ್ಕೆ ವಿರುದ್ಧ ಅರ್ಥ ಕೊಡುವ ಅನಾಫಿಲಾಕ್ಸಿಸ್ ಪದವನ್ನು ಬಳಸಿದ. ಸಾಯಿಸಿದ ಕ್ರಿಮಿಗಳ ಅಥವಾ ಅವುಗಳ ವಿಷಗಳನ್ನು ಚುಚ್ಚುವುದರಿಂದ ಏಳುವ ರೋಗವನ್ನು ಪಡೆವುದೇ ಮರೆನೀಡುವೆ. ಉದಾಹರಣೆಗೆ,  ಸಿಡುಬು ಹಾಕುವುದು ಮತ್ತು ಕಾಲರ ಲಸಿಕೆ. ಈ ಲಸಿಕೆಗಳನ್ನು ಹಾಕಿಸಿಕೊಂಡರೆ ಆಯಾ ರೋಗಗಳು ಬಂದು ಯಾರೂ ಸಾಯುವುದಿಲ್ಲ. ಪರಕೀಯ ಪ್ರೋಟೀನನ್ನು ಎರಡನೆಯ ಸಲ ಚುಚ್ಚಿದಾಗ ಪ್ರಾಣಿಗಳಲ್ಲಾಗುವ ಕೆಟ್ಟ ಪ್ರತಿಕ್ರಿಯೆಗೆ ಮರೆಹಾರಿಕೆ ಎಂಬುದು ಈಗಿನ ವೈಜ್ಞಾನಿಕ ಪದ.

ಒಗ್ಗದಿಕೆ ಮತ್ತು ಮರೆಹಾರಿಕೆ ಪ್ರತಿಕ್ರಿಯೆಗಳು ಪ್ರಾಣಿಗಳಲ್ಲೂ ಮನುಷ್ಯನಲ್ಲೂ ವಿವಿಧ ಪರಿಸ್ಥಿತಿಗಳಲ್ಲಿ ವಿವಿಧ ರೀತಿಯಲ್ಲಿ ವಿವಿಧ ಪರಿಣಾಮಗಳನ್ನೂ ಚಿಹ್ನೆಗಳನ್ನೂ ಉಂಟುಮಾಡುತ್ತವೆ. ಇವೆಲ್ಲವನ್ನೂ ಪ್ರಾಣಿ ತನ್ನ ಸುತ್ತಲಿನ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುವ ಯುಕ್ತ ವ್ಯಾಪಾರಗಳೆಂದು ತಿಳಿಯಬಹುದು. 

 ಮರೆಹಾರಿಕೆ ಪ್ರತಿಕ್ರಿಯೆ 
ಒಂದೊಂದು ಪ್ರಾಣಿಜಾತಿಗೂ ಇದು ವಿಶಿಷ್ಟ, ಪ್ರತಿಕ್ರಿಯೆಯನ್ನು ಕೆರಳಿಸುವ ಪರಕೀಯ ಪ್ರೊಟೀನಿನಿಂದ ಇದು ನಿಶ್ಚಿತವಾದುದಲ್ಲ. ಉದಾಹರಣೆಗೆ, ಗಿನಿ ಇಲಿಗೆ (ಗಿನಿ ಪಿಗ್) ಕುದುರೆಯ ರಕ್ತದ ರಸಿಕೆ (ಸೀರಂ) ಮೊಟ್ಟೆಯ ಬಿಳಿಲೋಳೆ ಅಥವಾ ಇತರ ಪ್ರೋಟೀನ್ ವಸ್ತುವನ್ನು ಮೇಲಿಂದ ಮೇಲೆ ಚುಚ್ಚುತ್ತಿದ್ದರೆ, ಅದು ಬರುಬರುತ್ತ ಮೈಗೆ ಒಗ್ಗದಂತಾಗಿ ಆ ಪ್ರೋಟೀನಿಗೆ ಬಲವಾಗಿ ಎದುರುಬೀಳುತ್ತದೆ. ಹೀಗಾಗಿ 10-12 ದಿವಸಗಳ (ಒಗ್ಗದಿಕೆ ಉಂಟಾಗುವ ಕಾಲ) ಮೇಲೆ ಮತ್ತೆ ಅದೇ ಪ್ರೋಟೀನಿನ ಚುಚ್ಚಿಕೆ ಮೈಗಾಗದೆ ಕೆಲವು ಮಿನಿಟುಗಳಲ್ಲಿ ಆ ಪ್ರಾಣಿ ಸೀನುತ್ತದೆ, ಮೂಗನ್ನು ಕೆರೆದುಕೊಳ್ಳುತ್ತದೆ, ಪರದಾಡುತ್ತದೆ, ಸಾಧಾರಣವಾಗಿ ಉಚ್ಚೆ ಹೊಯ್ದುಕೊಂಡು, ಉಸಿರಾಡಲು ಬಲು ಕಷ್ಟಪಡುತ್ತದೆ. ಕಷ್ಟಪಟ್ಟರೂ ಆಕ್ಸಿಜನ್ ಸಾಕಷ್ಟು ಮೈಗೂಡದೆ, ಸಾಯುವ ತನಕ ಅದರ ಕಷ್ಟ ಹೆಚ್ಚಬಹುದು. 

ಫುಪ್ಪುಸಗಳಲ್ಲಿರುವ ಗಾಳಿಕೊಳವೆಗಳು ಕುಗ್ಗಿ ಮುಚ್ಚಿಕೊಳ್ಳುವುದರಿಂದ ಗಾಳಿ ಒಳಕ್ಕೆ ಹೋಗದೆ ಉಸಿರಾಟ ಕಷ್ಟವಾಗುತ್ತದೆ. ಅದೇ ನಾಯಿಯಲ್ಲಾದರೆ ಮುಖ್ಯ ಚಿಹ್ನೆಗಳು-ವಾಂತಿ, ಮಲವಿಸರ್ಜನೆ, ರಕ್ತದ ಒತ್ತಡ ತಗ್ಗುವಿಕೆ, ಜ್ಞಾನ ತಪ್ಪುವುದು ಮತ್ತು ರಕ್ತ ಗಡ್ಡೆಕಟ್ಟಿದಂತಾಗುವುದು. ಮೊಲದಲ್ಲಿ ಮುಖ್ಯ ಚಿಹ್ನೆಗಳು-ಕಿವಿಗಳು ಒಂದು ಸಲ ಕೆಂಪಗಾದರೆ ಒಂದು ಸಲ ಬಿಳಿಚಿಕೊಳ್ಳುವುದು, ಮಲಮೂತ್ರ ವಿಸರ್ಜನೆ, ಗುಂಡಿಗೆಯ ಆಕ್ರಮ ಬಡಿತ, ಸೆಳವು. ಇನ್ನೂ ಹಲವು ಚಿಹ್ನೆಗಳೂ ಈ ಪ್ರಾಣಿಗಳಲ್ಲಿ ಕಾಣುತ್ತವೆ; ಉದಾಹರಣೆಗೆ, ಬಿಳಿ ರಕ್ತಕಣಗಳ ಸಂಖ್ಯೆ ಕುಸಿತ, ಹಾಲುರಸದ (ಲಿಂಫ್) ಹೆಚ್ಚಳಿಕೆ. ಪ್ರಾಣಿ ಇದರಿಂದ ಚೇತರಿಸಿಕೊಂಡು ಬದುಕಿದಲ್ಲಿ, 1-2 ದಿವಸಗಳು ಇನ್ನೊಂದು ಚುಚ್ಚುಗೆಗೆ ಕಷ್ಟಪಡದು. ಆಗ ಸುಲಭವಾಗಿ ಈಡಾಗದಿರುವುದರಿಂದ, ಅದು ಒಗ್ಗುವ ಸ್ಥಿತಿಯಲ್ಲಿರುತ್ತದೆ.

ಹೀಗೆ ಒಗ್ಗದಿಕೆ ತೋರುವ ಪ್ರಾಣಿಗಳಿಂದ ತೆಗೆದ ಮಾಂಸ ವಿಶೇಷಗಳೂ ಒಗ್ಗದಿಕೆಯ ಪ್ರತಿಕ್ರಿಯೆಗಳನ್ನು ತೋರುತ್ತವೆ. ಉದಾಹರಣೆಗೆ, ಗಿನಿ ಇಲಿಯ ಗರ್ಭಕೋಶ ಅಥವಾ ಕರುಳಿನ ತುಂಡನ್ನು ಬೆಚ್ಚಗೆ ಆಕ್ಸಿಜನ್ ಇರುವ ಮೈರಸದಂತಿರುವ ಲವಣ ದ್ರಾವಣದಲ್ಲಿ ತೂಗಹಾಕಿ, ಒಗ್ಗದಿಕೆ ಉಂಟುಮಾಡಿದ ಪರಕೀಯ ಪ್ರೋಟೀನನ್ನು ತೀರ ಸಣ್ಣ ಪ್ರಮಾಣದಲ್ಲಿ ತಾಕಿಸಿದರೂ ಆ ಭಾಗ ಬಲವಾಗಿ ಸೆಟೆದು ಮುದುಡಿಕೊಳ್ಳುತ್ತದೆ. ಇದಕ್ಕೆ ಷೂಲ್ಟ್‌್ಜ-ಡೇಲ್ ಪರೀಕ್ಷೆ ಎಂದು ಹೆಸರು. ಇದು ಎಷ್ಟು ಸೂಕ್ಷ್ಮ ಮತ್ತು ವಿಶಿಷ್ಟವೆಂದರೆ ಆ ಪರಕೀಯ ಪ್ರೋಟೀನಿನ 
ಒಂದು ಮಿಲಿಗ್ರಾಮಿನ ಭಾಗಾಂಶವಿರುವುದನ್ನೂ ಈ ಪರೀಕ್ಷೆಯಿಂದ ಕಂಡುಹಿಡಿಯಬಹುದು. ಇತರ ಪ್ರೋಟೀನಿನಿಂದ ಈ ಪ್ರತಿಕ್ರಿಯೆ ಕಾಣದು.

ಕೆಲವು ಪ್ರಾಣಿಗಳಲ್ಲಿ ಮೈಯಲ್ಲಿ ಎಲ್ಲಾದರೂ ಒಂದೆಡೆ ಒಗ್ಗದಿಕೆಯ ವಿಚಿತ್ರಗಳನ್ನು ನೋಡಬಹುದು. ಚುಚ್ಚಿ ಒಗ್ಗದಂತೆ ಮಾಡಿದ ಮೊಲದ ಚರ್ಮದ ಕೆಳಗೆ ಅದೇ ವಿಶಿಷ್ಟ ಪ್ರೋಟೀನನ್ನು ಚುಚ್ಚಿದರೆ 48 ಗಂಟೆಗಳೊಳಗೆ ಆ ಭಾಗ ಊದಿ, ಗಡುಸಾಗಿ ಕೊಳೆಯಬಹುದು. ಮೊದಲು ಇದನ್ನು ಮಾರೀಸ್ ಆರ್ಥಸ್ ವರ್ಣಿಸಿದುದರಿಂದ ಈ ತಾವಿನ ಪ್ರತಿಕ್ರಿಯೆಗೆ ಆರ್ಥಸ್ ವಿಚಿತ್ರ ಎನ್ನುತ್ತಾರೆ.

 ಒಗ್ಗದಿಕೆಯ ತೋರಿಕೆಗಳು 
 ಒಂದು ಪ್ರಾಣಿಜಾತಿಯಲ್ಲಿ ಕಾಣುವ ಒಂದೇ ತೆರನ ಮರೆಹಾರಿಕೆ ಪ್ರತಿಕ್ರಿಯೆಗೆ ಎದುರಾಗಿ ಮನುಷ್ಯನಲ್ಲಿ ಪ್ರತಿಕ್ರಿಯೆಗಳು ಬಗೆಬಗೆಯಾಗಿವೆ. ಕರಡಜ್ವರ (ನೋಡಿ- ಕರಡಜ್ವರ), ಗೂರಲು, ಇಸಬುಗಳು ತೀರ ಸಾಧಾರಣ ಪ್ರತಿಕ್ರಿಯೆಗಳು. ಆದರೆ ಜ್ವರ, ತಿಮಿರ, ನವೆ, ದದ್ದುಗಳು, ತೆಲನೋವು, ಹೊಟ್ಟೆನುಲಿತ, ಭೇದಿ ಮತ್ತು ಇನ್ನೂ ಹಲವು ರೋಗಾಲಕ್ಷಣಗಳಿಗೆ ಒಗ್ಗದಿಕೆ ಮೂಲವಾಗಿರಬಹುದು; ಮೂತ್ರಪಿಂಡದ ಉರಿತ (ನೆಫ್ರೈಟಿಸ್), ಕೀಲುವಾತದ ಜ್ವರ ಮುಂತಾದ ರೋಗಗಳು ಸರಕಾಯ್ಜೀವಿಗಳ (ಸ್ಟ್ರೆಪ್ಟೊಕಾಕೈ) ವಿಷಗಳ ಎದುರು ಒಗ್ಗದಿಕೆಯ ಪ್ರತಿಕ್ರಿಯೆಗಳೆಂದು ತಿಳಿಯಬಹುದು. ಯಾವುದಾದರೂ ಒಂದು ನಿರ್ದಿಷ್ಟ ರೋಗ ವಿಚಾರಕ್ಕೆ ಕನಿಷ್ಠವಾಗಿ ಮೂರು ಸಂಗತಿಗಳಿವೆ: 1 ಪರಕೀಯ ವಸ್ತು ಸೋಂಕುವ ಅಥವಾ ದೇಹದ ಒಳಹೋಗುವ ರೀತಿ, 2 ಒಗ್ಗದಿಕೆ ಜನಕವಾದ (ಅಲರ್ಜೆನ್) ಪರಕೀಯ ವಸ್ತುವಿನ ತಾವಿಗಂಟುವ ಗುಣ, 3 ಹೊರವಸ್ತುವಿನ ಹುಟ್ಟುಗುಣ. ಉದಾಹರಣೆಗೆ, ರ್ಯಾಗ್ವೀಡ್ ಗಿಡದ ಪರಾಗ ಸಾಧಾರಣವಾಗಿ ಮೊದಲು ಕಣ್ಣು ಮೂಗುಗಳಲ್ಲಿ ಹೊಕ್ಕು ಅಲ್ಲಿಯ ಮೈರಸಗಳೊಡನೆ ಬೆರೆತು ಅದೇ ತಾವಿನಲ್ಲಿ ಬೇನೆಯನ್ನುಂಟು ಮಾಡುತ್ತದೆ. ಆದರೆ ಕೆಲವರಲ್ಲಿ ರ್ಯಾಗ್ವೀಡಿನಿಂದ ಕರಡಜ್ವರವಲ್ಲದೆ ಗೂರಲೂ ಬರುವುದು; ಅಪುರ್ವವಾಗಿ ತಲೆನೋವು ಅಥವಾ ತುರುಚೆದದ್ದುಗಳು (ಆರ್ಟಿಕೇರಿಯ) ಕಾಣಬಹುದು. ಸೇವಿಸಿದ ಆಹಾರವಸ್ತುಗಳಿಂದ ಸಾಧಾರಣವಾಗಿ ಆಗುವ ಒಗ್ಗದಿಕೆ ಪ್ರತಿಕ್ರಿಯೆಗಳು-ಪೈತ್ಯಗಂದೆ ಅಥವಾ ದದ್ದುಗಳು ಚರ್ಮದಲ್ಲೇ ತೋರುತ್ತವೆ. ರ್ಯಾಗ್ವೀಡ್ ಪರಾಗದಿಂದ ಕರಡ ಜ್ವರವೂ ಮೀನು ತಿಂದರೆ ಪೈತ್ಯವೂ ಒಬ್ಬನಲ್ಲೇ ಕಾಣಬಹುದು. ಕೆಲವು ಮದ್ದುಗಳ ಸೇವನೆಯಿಂದಲೂ ಹೀಗೆ ದದ್ದುಗಳೇಳಬಹುದು. ಈ ಎಲ್ಲ ಪ್ರತಿಕ್ರಿಯೆಗಳ ಒಂದು ಸಾಮಾನ್ಯಗುಣವೆಂದರೆ ಒಂದು ವಸ್ತುವಿಗಾಗುವ ಒಗ್ಗದಿಕೆ ತೋರಿಕೆಗಳು ಅದೇ ಜಾತಿಯ ಹೆಚ್ಚು ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಆಗುವ ವಿಪರೀತ ಅಥವಾ ಔಷಧ ಶಾಸ್ತ್ರದಲ್ಲಿರುವ ಪ್ರತಿಕ್ರಿಯೆಗಿಂತ ಬೇರೆಯಾಗಿರುತ್ತವೆ. ಉದಾಹರಣೆಗೆ, ಔಷಧ ಶಾಸ್ತ್ರದ ಪ್ರಕಾರ ಬಹುಜನರಲ್ಲಿ ಫೀನೋಬಾರ್ಬಿಟೋನಿಗೆ ಪ್ರತಿಕ್ರಿಯೆ ಮಂಪುರ; ಆದರೆ ಒಗ್ಗದಿಕೆಯಿಂದ ದದ್ದುಗಳೇಳಬಹುದು.

 ಒಗ್ಗದಿಕೆ ರೋಗ ನಿರ್ಣಯ 
ಮೊತ್ತಮೊದಲಾಗಿ, ಈ ಪ್ರತಿಕ್ರಿಯೆ ಒಗ್ಗದಿಕೆಯೇ ಅಲ್ಲವೇ ಎಂದು ನಿರ್ಧರಿಸಬೇಕು. ಒಗ್ಗದ ಕಾರಣವಸ್ತುವನ್ನು ಕಂಡುಹಿಡಿಯಬೇಕು. ಎರಡನೆಯದಕ್ಕೆ ಉತ್ತರ ಸಿಗದೆ ಮೊದಲಿನ ಪ್ರಶ್ನೆಗೆ ಉತ್ತರ ಕಾಣುವುದು ಅಸಂಭವ. ಪ್ರತಿಕ್ರಿಯೆಯ ಸ್ವಭಾವದಿಂದ (ಉದಾ-ಪೈತ್ಯ) ಅಥವಾ ರೋಗವಿಲ್ಲದಿರುವ ಕಾಲಗಳ ನಡುವೆ ರೋಗ ಮತ್ತೆ ಕಾಣಿಸಿಕೊಳ್ಳುವುದರಿಂದ ಒಗ್ಗದಿಕೆಯನ್ನು ಶಂಕಿಸಬಹುದು. ಆದರೂ ಕಾರಕವನ್ನು ಕಂಡುಹಿಡಿಯದೆ ಒಗ್ಗದಿಕೆ ಖಚಿತವಿಲ್ಲ. ಜೀವಿಯಲ್ಲಿ ಪ್ರತಿಕ್ರಿಯಾ ಮಾರ್ಗಗಳು ಕೆಲವೇ ಇರುವುದೇ ಕಾರಣ, ಚಂಡನ್ನು ಆಡಿಸುವ ಶಕ್ತಿ ಪುಟಿದೇಳುವುದು ಅಥವಾ ಉರುಳುವುದು ಮಾತ್ರವೇ, ಹಾಗೇ, ಗಾಸಿಗೊಳಿಸುವ, ಅಪಾಯಕರ ಚೋದನೆಗಳಿಗೆ ಮೈಯ ಉತ್ತರ ಒಂದೇ ಇರಬಹುದು. ಉದಾಹರಣೆಗೆ, ರ್ಯಾಗ್ವೀಡ್ ಒಗ್ಗದಿದ್ದರೆ, ತಂಗಾಳಿಸೇವನೆ, ಕೆಮ್ಮು, ಪುಪ್ಫುಸನಾಳುರಿತ, ಹೃದ್ರೋಗ, ವ್ಯಾಕುಲಚಿತ್ತ, ಅಥವಾ ಉಸಿರ್ನಾಳವನ್ನು ಒತ್ತುವ ಗೆಡ್ಡೆ ಇವೆಲ್ಲಕ್ಕೂ ಒಂದೇ ಉತ್ತರವಾಗಿ ಸಾಮಾನ್ಯ ಗೂರಲು ಏಳಬಹುದು. ವಾಸ್ತವಿಕವಾಗಿ ಈ ಕಾರಣಗಳಲ್ಲಿ ಹಲವಾರು ಒಬ್ಬನಲ್ಲೇ ಆಗಾಗ ಒಟ್ಟಿಗೇ ತೋರುತ್ತವೆ.

ಒಗ್ಗದಿಕೆ ನಿರ್ಧಾರದಲ್ಲಿ ಕಾರಕವನ್ನು ತಿಳಿಯುವುದು ಮುಖ್ಯವಾದುದರಿಂದ ಒಗ್ಗದ ವಸ್ತುಗಳ ಹಲ ಬಗೆಗಳ ಸ್ವಲ್ಪ ಪರಿಚಯ ಅಗತ್ಯ, ಮದ್ದುಗಳು, ಹೂ ಪರಾಗ, ಬೂಷ್ಟು, ಗಾಯದ ಬಟ್ಟೆಗಳು, ಪ್ರಾಣಿ ಚರ್ಮಗಳ ಹೊಟ್ಟು, ತಲೆಹೊಟ್ಟು, ಕುಂಕುಮ, ಮುಖಪುಡಿ ಇತ್ಯಾದಿ ಅಲಂಕಾರದ್ರವ್ಯಗಳು, ಕೈಗಾರಿಕೆ ರಾಸಾಯನಿಕಗಳು, ಕ್ರಿಮಿಗಳು, ಆಹಾರದ್ರವ್ಯಗಳು ಮುಖ್ಯ ಕಾರಕಗಳು. ಈ ಪಟ್ಟಿಯಲ್ಲಿ ಒಬ್ಬನಿಗೆ ತಾಕಬಹುದಾದ ಎಲ್ಲ ವಸ್ತುಗಳಿದ್ದರೂ ಒಗ್ಗದಿಕೆ ಪ್ರತಿಕ್ರಿಯೆಯ ಸ್ವಭಾವ. ಕ್ರಮವನ್ನು ಗಮನಿಸುವುದರಿಂದ ಹೆಚ್ಚು ಸಂಗತಿಗಳು ತಿಳಿಯುತ್ತವೆ. ನಿಖರವಾದ ನಿರ್ಣಯಕ್ಕೆ ಬೇಕಾದುದು, ರೋಗಿಯ ಸರಿಯಾದ ಪುರ್ಣ ಚರಿತ್ರೆ. ಹೂ ಪರಾಗ, ಬೂಜಲು ಮತ್ತಿತರ ಇಂಥ ಉಸಿರಲ್ಲಿ ಒಳಸೇರುವ ಪದಾರ್ಥಗಳಿಗೆ ಪ್ರತಿಕ್ರಿಯೆ ಕಣ್ಣು, ಮೂಗು ಉಸಿರ್ನಾಳಗಳಲ್ಲಿ ಚಿಹ್ನೆಗಳನ್ನು ತೋರುತ್ತದೆ. 

ಅಂಗರಾಗವಸ್ತುಗಳನ್ನು ಹಚ್ಚಿರುವ ಮುಖ ಕೈಗಳ ಮೇಲೆ ಪ್ರತಿಕ್ರಿಯೆಗಳಾಗುತ್ತವೆ. ಹೂವಿನ ಪರಾಗದ ಒಗ್ಗದಿಕೆಗೆ ಋತು ಪ್ರಭಾವವಿದೆ, ವಸಂತ ಋತುವಿನಲ್ಲಿ ಮರಗಳೂ ಸೆಕೆಗಾಲದ ಮೊದಲಲ್ಲಿ ಹುಲ್ಲೂ ಆಮೇಲೆ ಕಳೆಗಳೂ ಪರಿಣಾಮಕಾರಿ ಕಾರಕಗಳು.
 
 ಶೋಧನೆಯ ಕ್ರಮಗಳು 
ಎಷ್ಟೊ ವಸ್ತುಗಳು ಒಗ್ಗದೆನ್ನುವವರ ವಿಚಾರಗಳನ್ನು ವಿವರವಾಗಿ ತಿಳಿಯುವುದೂ ನಿಸರ್ಗದಲ್ಲಿನ ವಸ್ತುಗಳಿಂದಾಗುವ ಪ್ರತಿಕ್ರಿಯೆಗಳನ್ನು ಚಾಚೂ ತಪ್ಪದೆ ಅವನ್ನೇ ಮತ್ತೆ ಚೋದಿಸುವಂತಿರುವುದೂ ಮುಖ್ಯ, ಒಗ್ಗದೆನ್ನುವ ವಸ್ತು ತುಟಿರಂಗಿನಂಥ ಚರ್ಮಸ್ಪರ್ಶಿಯಾದರೆ ಅದನ್ನೇ ಚೆನ್ನಾಗಿರುವ ಬೇರೆ ಚರ್ಮಭಾಗಕ್ಕೆ ಹಚ್ಚಿದಾಗ ಪ್ರತಿಕ್ರಿಯೆಯಾದರೆ ತುಟಿರಂಗು ಆ ವ್ಯಕ್ತಿಗೆ ಒಗ್ಗದೆಂದೂ ಪ್ರತಿಕ್ರಿಯೆ ಇಲ್ಲದಿದ್ದರೆ ಒಗ್ಗುವುದೆಂದೂ ಅರಿಯಬಹುದು. ಒಂದು ಆಹಾರದ್ರವ್ಯವನ್ನು ಊಟದಲ್ಲೋ ತಿಂಡಿಯಲ್ಲೋ ಕೊಡಬಹುದು ಅಥವಾ ಕೊಡದಿರಬಹುದು. ಇದರಿಂದ ಒಗ್ಗದ ವಸ್ತು ಯಾವುದೆಂದು ಕಂಡುಹಿಡಿಯಬಹುದು. ಇದಕ್ಕೋಸ್ಕರ ವಿವರವಾಗಿ ತಿಂಡಿತಿನಿಸುಗಳ ದಿನಚರಿ ಪುಸ್ತಕಗಳನ್ನು ಎಚ್ಚರಿಕೆಯಿಂದ ಇಡಬೇಕು. ಕೆಲವು ರೋಗಿಗಳ ವಿಚಾರದಲ್ಲಿ ಕೆಲವೇ ಮಾತ್ರವಿರುವ ಅಪುರ್ವ ಒಗ್ಗದಿಕೆ ಆಹಾರವಸ್ತುಗಳನ್ನು ಕಟ್ಟುನಿಟ್ಟಾಗಿ ಒಂದೊಂದನ್ನೇ ಬಿಟ್ಟು ಬಿಡುವಂತಿರುವ ಊಟತಿಂಡಿಗಳಿರಬೇಕು. ಆಗ ಶಂಕಿಸಲಾದವನ್ನು ಒಂದೊಂದಾಗಿ ಸೇರಿಸಿ ಹೌದೋ ಅಲ್ಲವೋ ಎಂದು ನಿರ್ಧರಿಸಬಹುದು. ಕೆಲವೇಳೆ ಒಗ್ಗದ ವಸ್ತು ತಾಕುವುದಕ್ಕೂ ಒಗ್ಗದಿಕೆಯ ಪ್ರತಿಕ್ರಿಯೆಗೂ ನಡುವೆ ಕೆಲವು ದಿವಸಗಳು ಕಳೆಯಬಹುದು. ಈ ನಿಧಾನ ಪ್ರತಿಕ್ರಿಯೆಯಿಂದ ತೊಂದರೆಗಳಿವೆ. ಆಹಾರವಸ್ತುಗಳ ಒಗ್ಗದಿಕೆ ಕಂಡುಹಿಡಿಯಲು ಬಹಳ ಕಾಲ ಹಿಡಿಯಬಹುದು. ಚರ್ಮತಾಕಣೆ ಒಗ್ಗದಿಕೆ ವಿಚಾರದಲ್ಲಿ ಚೋದಕವಸ್ತುವನ್ನು ಒಂದು ಅಂಟು ತೇಪೆಗೆ ಬಳಿದು ಚರ್ಮಕ್ಕೆ ಮೆತ್ತಿ ಹಲವು ದಿನಗಳು ಬಿಡಬಹುದು. ಉಸಿರಲ್ಲಿ ನುಗ್ಗುವ ಪ್ರಚೋದಕಗಳಿಗೆ ಈ ವಿಧಾನ ಅಸಾಧ್ಯ. ಅಲ್ಲದೆ ಶಂಕಿಸಲಾದ ವಸ್ತುವನ್ನು ಮೂಸಿಸುವುದು ಹಲವು ವೇಳೆ ಅಪಾಯಕರ. ಈ ಸಂದರ್ಭದಲ್ಲಿ ಪ್ರಚೋದಕಗಳ ಕಷಾಯಗಳನ್ನೋ ದ್ರಾವಣವನ್ನೋ ಸಣ್ಣ ಕೆರೆದ ಗೀರಿನ ಮೂಲಕ ಚರ್ಮಕ್ಕೆ ಬಳಿಯಬಹುದು, ಸೂಜಿ ಜೀಕಳಿಯಿಂದ ಚರ್ಮದ ಮೇಲ್ಪದರಗಳಿಗೆ ಚುಚ್ಚಿ ಹೊಗಿಸಬಹುದು. ಈ ವಿಧಾನಗಳು ಅಷ್ಟು ನಂಬಲರ್ಹವಲ್ಲ.

 ಒಗ್ಗದಿಕೆ ಪ್ರತಿಕ್ರಿಯೆಯ ತಂತ್ರ 
ಇದನ್ನು ವಿವರಿಸುವುದರಲ್ಲಿ ಹಲವು ಅಭಿಪ್ರಾಯಸೂತ್ರಗಳಿವೆ. ಆದರೆ ಇವುಗಳಲ್ಲಿ ಯಾವುದರಿಂದಲೂ ಕಂಡ ವಿಚಿತ್ರಗಳಿಗೆ ತೃಪ್ತಿಕರ ಕಾರಣಗಳಾಗಲಿ ಉತ್ತರಗಳಾಗಲಿ ಸಿಗುವುದಿಲ್ಲ. ಇವಕ್ಕೀಡಾಗುವವನಲ್ಲಿ ಒಗ್ಗದ ವಸ್ತು ಸೇರುವುದರಿಂದ ಬಗೆಬಗೆಯ ವಿಚಾರಗಳು ನಡೆವಂತಿರುವುವು. ರಾಸಾಯನಿಕ ವಸ್ತುವಾದ ಹಿಸ್ಟಮೀನ್ ಕೆಲವೇಳೆ ಮೈಯಲ್ಲಿ ಏಳುತ್ತದೆ. ಇದು ಕರುಳಿನಂಥ ಅಂಗಗಳಲ್ಲಿರುವ ಮನಸ್ಸಿನ ಹತೋಟಿಯಲ್ಲಿಲ್ಲದ ನಯಸ್ನಾಯುವಿನ ಕುಗ್ಗು, ಲೋಮನಾಳಗಳ ಹಿಗ್ಗು ರಕ್ತದ ಒತ್ತಡದ ತಗ್ಗಿಸುವ ಬಹುಪ್ರಭಾವ ತೋರುವ ವಸ್ತು. ಅಡ್ರಿನಲಿನ್ ಚುಚ್ಚುಮದ್ದಿನ ಪ್ರಭಾವ ಇದಕ್ಕೆ ವಿರುದ್ಧ. ಇದರೊಂದಿಗೆ ಉತ್ಪತ್ತಿಯಾಗುವ ಇತರ ವಸ್ತುಗಳಲ್ಲಿ ಅಸಿಟೈಲ್ ಕೋಲಿನ್, ಹೆಪರಿನ್ ಸಿರೋಟೋನಿನುಗಳೂ ಇರಬಹುದು. ಜೀವಕೋಶಗಳು ಹಾಳಾದಾಗ ಅವುಗಳಲ್ಲಿ ಈ ತೆರನ ಇನ್ನೂ ಹೆಚ್ಚಿನ ವಸ್ತುಗಳು ಹುಟ್ಟಬಹುದು. ಜೀವಕೋಶಗಳು ಹೇಗೆ ಹಾಳಾಗುತ್ತವೆಂದು ಅರಿವಿಗೆ ಎಟಕುವುದಿಲ್ಲ. ಆದರೂ ಒಗ್ಗದಿಕೆ ಚೋದಕಕ್ಕೂ ರೋಧವಸ್ತುವೆಂಬ (ಆಂಟಿಬಾಡಿ) ಮೈಯಲ್ಲಿನ ಒಂದು ಪ್ರೋಟೀನಿಗೂ ಆಗುವ ಪ್ರತಿಕ್ರಿಯೆಯೇ ಒಗ್ಗದಿಕೆಯ ಮೂಲ ತಂತ್ರ ಎಂದು ಹಲವು ವಿಜ್ಞಾನಿಗಳು ನಂಬಿದ್ದಾರೆ.

 ಒಗ್ಗದಿಕೆ, ರೋಗತಡೆ (ಇಮ್ಯೂನಿಟಿ) 
ರೋಗಾಣುಗಳಿಂದೇಳುವ ರೋಗಕ್ಕೆ ಒಬ್ಬನ ಸಾಮಾನ್ಯ ಪ್ರತಿಕ್ರಿಯೆ ಮೈಯಲ್ಲಿ ರೋಧಕವಸ್ತುಗಳ ಉತ್ಪತ್ತಿ. ಇವು ಒಳಹೋಗುವ ರೋಗಾಣುಗಳನ್ನು ತಡೆಗಟ್ಟುವ, ನಾಶಪಡಿಸುವ, ಕಾಪಿಡುವ ವಸ್ತುಗಳು. ಈ ರೋಧವಸ್ತುಗಳನ್ನು ಮೈಯಲ್ಲಿ ಹುಟ್ಟುವಂತೆ ಚೋದಿಸಿದ ರೋಗ ಮತ್ತೊಮ್ಮೆ ತಗಲಿದಲ್ಲಿ ಮೈಯಲ್ಲಿ ಮೊದಲೇ ಹುಟ್ಟಿಕೊಂಡ ರೋಧವಸ್ತುಗಳ ಮೈಗೆ ಮರೆ ಕೊಡುಗೆ (ಇಮ್ಯೂನಿಟಿ) ನೀಡುತ್ತವೆ. ರೋಧವಸ್ತುಗಳು ಬಹು ವಿಶಿಷ್ಟ ರೀತಿಯವು. ದಡಾರದ ರೋಧವಸ್ತು ಸೀತಾಳಸಿಡುಬಿನ ಎದುರು ಮರೆ ನೀಡುವುದಿಲ್ಲ. ವೈರಸುಗಳನ್ನೂ ರೋಗಾಣುಗಳನ್ನೂ ಮೈಯ ಇತರ ವಸ್ತುಗಳಿಂದಲೋ ಜೀವಕಣಗಳಿಂದಲೋ ನಾಶಿಸುವುದು ರೋಧವಸ್ತುವಿನ ಮುಖ್ಯ ಕೆಲಸ. ಸತ್ತ ವೈರಸ್ ಮತ್ತು ರೋಗಾಣುಗಳ ವಿಷಗಳಿಂದ ರೋಧವಸ್ತು ಹುಟ್ಟಬಹುದು. ಈ ವಿಷಯವೇ ಮರೆಕೊಡುಗೆಯ ಚೋದನಾ ವಿಧಾನಗಳ ಬುನಾದಿ. ದೇಹದ ಮಾಂಸ ವಿಶೇಷಗಳಲ್ಲಿ ಸೇರುವ ಅಪಾಯವಿಲ್ಲದ ವಸ್ತುಗಳಿಂದಲೂ ರೋಧವಸ್ತುಗಳು ಏಳುತ್ತವೆ. ಬದುಕಿ ಬಾಳಲು ಬೇಕೇಬೇಕಾಗಿ ಹೊಂದಿಕೊಳ್ಳುವ ತಂತ್ರವಾದ ರೋಧವಸ್ತು ಪ್ರತಿಕ್ರಿಯೆ ಕೆಲವು ವೇಳೆ ಮರೆಕೊಡುವುದರ ಜೊತೆಗೆ ಒಗ್ಗದಿಕೆಯ ಕೆಟ್ಟ ಪರಿಣಾಮವನ್ನೂ ತೋರುತ್ತದೆ. ಅಪಾಯಕರ ಮತ್ತು ಅಪಾಯವಿಲ್ಲದ ವಸ್ತುಗಳನ್ನು ವಿವೇಚಿಸಲು ಮೈಗೆ ಶಕ್ತಿ ಇಲ್ಲದ್ದೂ ಒಗ್ಗದಿಕೆಗೆ ಒಂದು ಕಾರಣ. ಒಬ್ಬನನ್ನು ಎಚ್ಚರಿಸಿ ಅವನ ಮೈಕಾಪಿಡುವ ವ್ಯವಸ್ಥೆಗಳನ್ನು ಚೋದಿಸುವುದು ಕೆಟ್ಟ ರೋಗಾಣುಗಳು ವಿಷಪದಾರ್ಥಗಳಿಗಾಗುವ ಒಗ್ಗದಿಕೆ ಚಿಹ್ನೆಗಳ ಬಹುಮುಖ್ಯ ಕೆಲಸವೆಂಬುದು ಇನ್ನೊಂದು ಕಾರಣ.

 ಚಿಕಿತ್ಸೆ 
ವೈದ್ಯಶಾಸ್ತ್ರದಲ್ಲಿ, ಗೊತ್ತಿರುವ ಕಾರಣ ನಿವಾರಣೆಯೇ ಎಲ್ಲ ಚಿಕಿತ್ಸಾ ತಂತ್ರಗಳ ಮೂಲಸೂತ್ರ. ಒಗ್ಗದ ವಸ್ತು ಯಾವುದೆಂದು ತಿಳಿದ ಮೇಲೆ ರೋಗಿ ಅದನ್ನು ಹತ್ತಿರ ಸೇರಿಸಬಾರದು; ಹಕ್ಕಿ, ಬೆಕ್ಕು, ನಾಯಿ, ಮತ್ತಿತರ ಪ್ರಾಣಿಗಳನ್ನು ಮನೆಯಲ್ಲಿಲ್ಲದಂತೆ ಮಾಡುವುದು, ತಲೆದಿಂಬಿನ ರೇಷ್ಮೆ ಗವುಸನ್ನು ಬದಲಾಯಿಸುವುದು, ಮನೆಯನ್ನು ಚೊಕ್ಕಟಮಾಡುವುದು, ದೂಳಿನ ಕಂಬಳಿ, ಜಮಖಾನೆ, ಹಳೆಯ ಮೆತ್ತೆ, ಸೋಫಾಗಳನ್ನು ಮನೆಯಿಂದ ತೆಗೆವುದು-ಈ ಕಾರ್ಯಕ್ರಮವೇ ಸಾಕಾಗಬಹುದು. ತನ್ನ ಹೆಂಡತಿ ಅವಳ ಮುಖಕ್ಕೆ ಪುಸುವ ಅಂಗರಾಗದ ಸುವಾಸನೆ ಹುಡಿಯೇ ಗಂಡನಿಗೆ ಒಗ್ಗದಿರಬಹುದು; ಆಗ ಅದನ್ನು ಪುರ್ತಿಯಾಗಿ ಬಿಡಬೇಕು. ಚೋದಕವಸ್ತುವಿನ ಸುಳಿವು ರೋಗಿಯ ಚರಿತ್ರೆಯಲ್ಲಿರುವುದನ್ನು ಎಚ್ಚರದಿಂದ ಕಂಡುಕೊಳ್ಳಬೇಕು. ಈ ರೀತಿಯ ಕಾರಣ ಹೋಗಲಾಡಿಸಲಾಗದಿದ್ದಲ್ಲಿ, ವಿಶಿಷ್ಟ ಚೋದಕ ವಸ್ತುವನ್ನು ತೀರ ಸಣ್ಣ ಪ್ರಮಾಣಗಳಲ್ಲಿ ಒಂದು ವರಸೆಯಾಗಿ ಚುಚ್ಚುತ್ತ ಒಗ್ಗುವಂತೆ ಮಾಡಲು ಯತ್ನಿಸಬಹುದು. ಆದರೆ ಈ ಕೆಲಸ ಬಲು ಕಷ್ಟ. ಇದಕ್ಕೆ ತಾಳ್ಮೆ ಬೇಕು. ಹೆಚ್ಚು ರೋಗಿಗಳಲ್ಲಿ ಒಬ್ಬರೊಡನೊಬ್ಬರನ್ನು ಹೋಲಿಸಲು ಸುಲಭವಾದ್ದರಿಂದ ಕರಡಜ್ವರದಲ್ಲಂತೂ ಇದು ಹೆಚ್ಚು ಫಲಕಾರಿ. ಹೆಚ್ಚೇನೆಂದರೆ ಒಂದೇ ರೋಗಿಯನ್ನು ವರ್ಷವರ್ಷವೂ ನೋಡುತ್ತಿರುವುದರಿಂದ ಚುಚ್ಚುಗೆಗಳನ್ನು ತೀರ ಕಡಿಮೆ ಮಾಡಲು ಸಾಧ್ಯ. ಕೊನೆಗೆ ಚುಚ್ಚಬೇಕಿಲ್ಲದಂತೆ ಮಾಡಲೂ ಕೆಲವು ವೇಳೆ ಸಾಧ್ಯ.

1945ರಲ್ಲಿ ಮೊದಲಾಗಿ, ಒಂದೇ ಸಮನಾಗಿ ಬಳಕೆಯಲ್ಲಿರುವ ಹಿಸ್ಟಮೀನ್ರೋಧಕ ಮದ್ದುಗಳನ್ನು ಕಂಡು ಹಿಡಿಯಲಾಗಿ ಆ ದಿಸೆಯಲ್ಲಿ ಎಷ್ಟೊ ಮುನ್ನಡೆಯಾಗಿದೆ. ಅಷ್ಟೇ ಅಲ್ಲದೆ, 1949ರ ಮೇ ತಿಂಗಳಲ್ಲಿ ಅಮೆರಿಕದ ಮೇಯೋ ಚಿಕಿತ್ಸಾಲಯದಲ್ಲಿ ಫಿಲಿಪ್ ಎಸ್. ಹೆಂಚ್, ಎಡ್ವರ್ಡ್ ಸಿ. ಕೆಂಡಲ್ ಮತ್ತು ಅವರ ಸಂಗಡಿಗರು ಅಡ್ರಿನಲ್ ಗ್ರಂಥಿಯಿಂದ ತೆಗೆದ ಕಾರ್ಟಿಸೋನನ್ನೂ ಪಿಟುಯಿಟರಿ ಗ್ರಂಥಿಯಿಂದ ತೆಗೆದ ಒಂದು ಚೋದನಿಕವನ್ನೂ (ಅಡ್ರಿನೊಕಾರ್ಟಿಕೋಬ್ರೋಪಿಕ್ ಹಾರ್ಮೋನ್) ಕಂಡುಹಿಡಿದು ಪ್ರಕಟಿಸಿದರು. ಈ ಅದ್ಭುತ ಪ್ರಭಾವಯುತ ಮದ್ದುಗಳು ದೇಹದಲ್ಲಿ ಕಷ್ಟ ಪ್ರಯಾಸಗಳಿಂದಾಗುವ ಗಾಸಿಗಳ ವಿರುದ್ದ ಏರ್ಪಡುವ ರಕ್ಷಣವ್ಯವಸ್ಥೆಯಲ್ಲಿ ನೈಸರ್ಗಿಕ ಮುಖ್ಯಪಾತ್ರಧಾರಿಗಳು. ಸಾಕಷ್ಟು ಪ್ರಮಾಣಗಳಲ್ಲಿ ರೋಗಿಗೆ ಕೊಟ್ಟಾಗ ಒಗ್ಗದಿಕೆ ರೋಗಗಳೇ ಅಲ್ಲದೆ ಇನ್ನೂ ಹಲವಾರು ತೊಂದರೆಗಳಿಗೆ ಶಾಮಕವಾಗಿವೆ. 

ಇವು ಒಗ್ಗದಿಕೆಯ ಪ್ರತಿಕ್ರಿಯೆಗಳನ್ನು ತಡೆಯದಿದ್ದರೂ ಅವುಗಳ ಪರಿಣಾಮ ಗಳನ್ನು ಯಾವುದೋ ರೀತಿಯಲ್ಲಿ ಸರಿಪಡಿಸುತ್ತವೆ. ಆದರೆ ಬಹುಕಾಲ ಕೊಡುತ್ತಲೇ ಇದ್ದರೆ ಈ ಮದ್ದುಗಳಿಂದ ಬಲು ಕೆಡುಕು. ಒಗ್ಗದಿಕೆಯ ಸಮಸ್ಯೆಗೆ ಅವೇನೂ ಕಡೆಯ ಉತ್ತರವಲ್ಲ.

ಈಚೆಗೆ ಇನ್ನೂ ಕೆಲವು ಮದ್ದುಗಳ ಸೃಷ್ಟಿಯಾಗಿದೆ. ಇವುಗಳಲ್ಲಿ ಮೂರು ವಿಧಗಳು: ಹಿಸ್ಟಮೀನ್ ಮುಂತಾದವನ್ನು ನಾಶಪಡಿಸುವವು; ಅವು ಕೆಲಸ ಮಾಡುವ ದಾರಿಗೆ ಅಡ್ಡಿ ಬರುವವು; ಅವುಗಳ ಕೆಲಸಕ್ಕೆ ಎದುರಾಗುವಂಥವು.	(ಎಂ.ಡಿ.; ವಿ.ಆರ್.ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ